Saturday, May 15, 2010

ಕೇರಳ ರಾಜಧಾನಿ ತಿರುವನಂತಪುರದಲ್ಲಿ ಸರಳ- ಸುಂದರ - ಅರ್ಥಪೂರ್ಣ - ವಿಶ್ವ ಕಾಯಕ ದಿನ



ಕೇರಳದ ತಿರುವನಂತಪುರದ 'ವಿಶ್ವ ಕಾಯಕ ದಿನ' ಮೇ ಒಂದರಂದು ಆಯೋಜಿಸಿದ್ದು ಅರ್ಥಪೂರ್ಣ. ಕೇರಳದ ಬಸವ ತತ್ವ ಅನುಯಾಯಿಗಳು ತುಂಬ ನಿಷ್ಠರಾಗಿದ್ದಾರೆ ಎಂಬುದು ಈ ಸರಳ-ಸುಂದರ ಕಾರ್ಯಕ್ರಮದಿಂದ ಸಾಬೀತಾಯಿತು.
ಕೇರಳ ಸರಕಾರದ LDF ನಾಯಕ ಕೃಷಿ ಮಂತ್ರಿ ಶ್ರೀ ಮುಲ್ಲಕರ ರತ್ನಾಕರನ್ ಕಾರ್ಯಕ್ರಮ ಉದ್ಘಾಟಿಸಿದರು. ಬಸವ - ಗಾಂಧೀಜಿ- ವಿವೇಕಾನಂದ ಹಾಗೂ ನಾರಾಯಣ ಗುರು ಅವರ ಸಿದ್ಧಾಂತಗಳು ನಮಗೆಲ್ಲ ದಾರಿದೀಪವಾಗಬೇಕು. ಕೇರಳದ ವೀರಶೈವರು ಬಸವಣ್ಣನನ್ನು ನಮಗೆ ಪರಿಚಯಿಸಿದ್ದು ಹೆಮ್ಮೆ ಎನಿಸಿದೆ.
ಬಸವಣ್ಣ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೇ ಇಡೀ ಜಗತ್ತಿಗೆ ಗುರುವಾಗಿದ್ದಾರೆ. ಅವರ ಕಾಯಕ ಸಿದ್ಧಾಂತ ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಧ್ಯಾನ, ಪೂಜೆಗಿಂತ ಮಿಗಿಲಾದದ್ದು ನಿಜವಾದ ಧರ್ಮವೆಂದರೆ ಕಾಯಕ.
ಕಾಯಕದ ಮೂಲಕವೇ ಒಂದು ಧರ್ಮವನ್ನು ಕಟ್ಟಿ ಬೆಳೆಸಿದ ಬಸವಣ್ಣನವರು ನಮಗೆಲ್ಲ ಆದರ್ಶ ನಾಯಕ ಎಂದರು.
ಬಸವಣ್ಣನವರ ತತ್ವಾದರ್ಶಗಳನ್ನು ಕೇರಳದ ಪಠ್ಯಕ್ರಮದಲ್ಲಿ ಅಳವಡಿಸುವುದು ಹೆಚ್ಚು ಸೂಕ್ತ ಎಂದರು.
ಉತ್ತಮ ಕಾರ್ಯಕ್ರಮ ಆಯೋಜಿಸಿದ ಬಸವ ಸಮಿತಿಯನ್ನು ಅಭಿನಂದಿಸಿದರು ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ದ ಸಾಹಿತಿ - ಚಿಂತಕ ಪ್ರೊ. ಸಿದ್ದು ಯಾಪಲಪರವಿ ಕಾಯಕ - ದಾಸೋಹ ಹಾಗೂ ಅನುಭವ ಮಂಟಪದ ಪರಿಕಲ್ಪನೆಯನ್ನು ವಚನಗಳ ಆಧಾರದ ಮೂಲಕ ವಿವರಿಸಿದರು. ಅಕ್ಷರ-ಅರಿವು, ಕಾಯಕ - ದಾಸೋಹ ಪರಿಕಲ್ಪನೆಯಿಂದಾಗಿ ಧರ್ಮ ಅರ್ಥಪೂರ್ಣವಾಗಿ ಬೆಳೆಯಲು ಸಾಧ್ಯವಾಯಿತು. ವಚನಗಳಲ್ಲಿನ ವಿಚಾರಧಾರೆಗಳು, ಕಾವ್ಯಸೂಕ್ಷ್ಮತೆ, ಸಂಕೇತ, ಪ್ರತಿಮೆಗಳು ಹಾಗೂ ಸುಂದರ ಭಾಷೆ ವಚನ ಸಾಹಿತ್ಯವನ್ನು ಶ್ರೇಷ್ಠ ಕಾವ್ಯದ ಮಟ್ಟಕ್ಕೆ ತಲುಪಿಸಿವೆ ಎಂದರು. ಇವರು ವಿವರಿಸಿದ ಎಲ್ಲ ವಚನಗಳ ಸಾಲುಗಳನ್ನು ಮಲೆಯಾಳಿಗೆ ಪ್ರಸನ್ನ ಕುಮಾರ ಅನುವಾದಿಸಿದರು. ನಂತರ ಸಂವಾದ ಕಾರ್ಯಕ್ರಮದಲ್ಲಿ ಅನೇಕರಿಗೆ ಪ್ರೊ. ಯಾಪಲಪರವಿ ಉತ್ತರಿಸಿದರು. ಬಸವ ಪಥ ಚರ್ಚೆಗೆ ಭಾಷೆ ಅಡ್ಡಗೋಡೆಯಾಗದಿದ್ದದು ವಿಶೇಷ. ಕೇರಳ ಸರಕಾರದ ಗ್ರಾಮೀಣ ಇಲಾಖೆಯ ಸಲಹೆಗಾರ ಪ್ರೊ. ಎ.ಆರ್. ಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಕೇರಳ ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂತ್ರಿಗಳನ್ನು, ಚಿಂತಕ ಯಾಪಲಪರವಿ ಅವರನ್ನು ಅಭಿನಂದಿಸಿದರು. ರಾಜ್ಯ ವೀರಶೈವ ಮಹಾಸಭಾದ ಅಧ್ಯಕ್ಷ ಕುಂಜುಮನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳದಲ್ಲಿ ಬಸವ ತತ್ವಮನೆಮನೆಯಲ್ಲಿ ಬೆಳಗುತ್ತದೆ.ಸರಕಾರ ಕೂಡಾ ಕಾಯಕ ದಿನದಲ್ಲಿ ಪಾಲ್ಗೊಂಡಿರುವುದು ಲಿಂಗಾಯತ ಧರ್ಮಕ್ಕಿರುವ ಸಾಮರ್ಥ್ಯವನ್ನು ತೋರುತ್ತದೆ ಎಂದರು. ಬಸವ ಸಮಿತಿಯ ಅರವಿಂದ ಜತ್ತಿ ಅನೇಕ ಉಪಯುಕ್ತ ಗ್ರಂಥಗಳನ್ನು ನಮ್ಮ ಭಾಷೆಗೆ ಪರಿಚಯಿಸಿ, ಶ್ರೇಷ್ಠ ತಜ್ಞರನ್ನು ನಾಡಿಗೆ ಕಳಿಸುತ್ತಿರುವುದು ಅಭಿನಂದನೀಯ ಎಂದರು. ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಶೋಭನಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಿರುವಂನಂತಪುರದ ಅಧ್ಯಕ್ಷ ಕೆ.ಎನ್.ಪಿಳೈ, ಕೇರಳಾಧ್ಯಕ್ಷ ಟಿ.ವಿ. ಶಶಿಕುಮಾರ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಲಿಂಗಾಯತ ಧರ್ಮದ ವಿವಿಧ ಆಯಾಮಗಳ ಕುರಿತು ನಂತರ ಚರ್ಚಿಸಲಾಯಿತು.
ವರದಿ-ಪ್ರಸನ್ನಕುಮಾರ