ಇತ್ತೀಚೆಗೆ ಶಿವಯೋಗ ಮಂದಿರದಲ್ಲಿ ಈ ಶತಮಾನದ ಬಹುದೊಡ್ಡ ಅಯಶಸ್ವಿ ಸಮಾರಂಭವೊಂದು ಜರುಗಿತು. ಇದರ ಫಲವಾಗಿ 'ಪ್ರಜಾವಾಣಿ' ಪತ್ರಿಕೆಯಲ್ಲಿ ಉದ್ಭವಿಸಿದ ಸಂವಾದದಲ್ಲಿ ಪಂಚಾಚಾರ್ಯರನ್ನು ವಿರೋಧಿಸಿ ಎಲ್ಲ ಸಮಾಜದ-ಸ್ತರದವರು ಬರೆದರೆ, ಅವರ ಪರವಾಗಿ ಬರೆದವರು ಕೇವಲ ವೀರಶೈವ ವಿದ್ವಾಂಸ ಜಂಗಮರೆಂಬುದು ಗಮನಿಸಬೇಕಾದ ಅಂಶವಾಗಿದೆ.
12 ನೆಯ ಶತಮಾನದ ಶರಣ ಚಳುವಳಿಯೆಂಬ ಕುದಿಯುವ ಪಾತ್ರೆಯಲ್ಲಿ ಅನೇಕ ಮತ ಪಂಥಗಳು ಕರಗಿ ಹೋದವು. ಬಳಿಕ ಅದರ ಒಡಲಿನಿಂದ ಶರಣ ಸಿದ್ಧಾಂತದ ಪ್ರಸಾರಕ- ಪ್ರತಿನಿಧಿಗಳೆಂಬಂತೆರ ಕರ್ನಾಟಕದ ಹಳ್ಳಿ - ಪಟ್ಟಣಗಳಲ್ಲಿ ಶರಣ ಜಂಗಮರು ತಲೆಯೆತ್ತಿ ನಿಂತರು. ಇಂದಿಗೂ ಅವರ ಮಠಗಳಲ್ಲಿರುವ ಕನ್ನಡ ಸಂಸ್ಕೃತ ತಾಳೆ ಗರಿಗ್ರಂಥ, ಕಾಗದ ಪತ್ರಗಳು 'ಶ್ರೀ ಗುರು ಬಸವಲಿಂಗಾಯ ನಮ:' ಎಂಬ ಒಕ್ಕಣಿಕೆಯಿಂದಲೇ ಆರಂಭವಾಗಿರುವುದು, ಷಡಕ್ಷರದೇವ, ಬಾಳೆಹಳ್ಳಿ ಪೀಠದ ಕುಮಾರ ಚೆನ್ನಬಸವ ಮೊದಲು ಮಾಡಿ ಎಲ್ಲ ಗುರು ವರ್ಗದ ಮಠಾಧೀಶರು ಹೆಚ್ಚಾಗಿ ಶರಣರನ್ನೇ ಕುರಿತು ಸಾಹಿತ್ಯ ಬರೆದುದು ಇದಕ್ಕೆ ನಿದರ್ಶನ.
ಈ ಬಸವ ನಿಷ್ಠ ಧೋರಣೆ ಮುಂದುವರೆಯುತ್ತಿದ್ದಂತೆಯೇ ವಿಜಯನಗರ ಸಾಮ್ರಾಜ್ಯ ಸಂದರ್ಭದಲ್ಲಿ ಹಂಪಿ ನೆರೆಯ ಆಂದ್ರದ ಆರಾಧ್ಯ ಜಂಗಮರು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ಪ್ರವೇಶಿಸಿ, ಬಳಿಕ ವಿಜಯ ನಗರ ಮುಂದುವರಿಕೆಯಾದ ಕೆಳದಿ, ಮೈಸೂರು ರಾಜ್ಯಗಳಲ್ಲಿ ಶಾಶ್ವತ ನೆಲೆನಿಂತರು. ಇದರಿಂದಾಗಿ ನಮ್ಮ ನಾಡಿನಲ್ಲಿ ಶರಣ ಜಂಗಮರು, ಆರಾಧ್ಯ ಜಂಗಮರೆಂಬ ಎರಡು ಸಮಾಜಗಳು ಅಸ್ತಿತ್ವಕ್ಕೆ ಬಂದವು. ಇಬ್ಬರ ಎದೆಯ ಮೇಲೆ ಲಿಂಗವಿರುವುದು, ಇವೆರಡೂ ಪಕ್ಷಗಳು ಒಂದೇ ಎಂಬ ಭ್ರಮೆ ಹುಟ್ಟಿಸಿತು. ನಿಜಸ್ಥಿತಿಯೆಂದರೆ, ಶರಣ ಜಂಗಮರ ಎದೆಯ ಮೇಲಿನದು ತನ್ನೊಳಗಿನ ಆತ್ಮಲಿಂಗದ ಪ್ರತೀಕವಾದರೆ, ಆರಾಧ್ಯ ಜಂಗಮರ ಎದೆಯ ಮೇಲಿನದು ದೇವಾಲಯದೊಳಗಿನ ಸ್ಥಾವರಂಲಿಂಗದ ಸಣ್ಣ ಪ್ರತೀಕ. ಪ್ರವಾಸ ಪ್ರಸಂಗದಲ್ಲಿ ಮಾರ್ಗ ಮಧ್ಯದ ಪೂಜೆಗಾಗಿ ಅದನ್ನು ಕೊರಳಿಗೋ, ತೋಳಿಗೋ ಕಟ್ಟಿಕೊಂಡು ಹೋಗುತ್ತಿದ್ದ ಅವರು, ಪ್ರವಾಸ ಮುಗಿದೊಡನೆ ಬಿಚ್ಚಿ ಮತ್ತೆ ಮನೆಯ ಜಗುಲಿಯ ಮೇಲಿಡುತ್ತಿದ್ದರು. ಅಂದರೆ ಇವರೆಗೆ ಜನಿವಾರ ಕಡ್ಡಾಯ, ಲಿಂಗ ಐಚ್ಛಿಕವಾಗಿದ್ದಿತು.
ಕರ್ನಾಟಕಕ್ಕೆ ಕಾಲಿಟ್ಟ ಇಂಥವರಲ್ಲಿ ಕೆಲವರು ಇಲ್ಲಿಯ ಶರಣ ಜಂಗಮರೊಂದಿಗೆ ಹೊಂದಿಕೊಂಡು ಬಾಳುವ ಸಲುವಾಗಿ ತಮ್ಮ ಕಡ್ಡಾಯ ಜನಿವಾರದ ಜೊತೆ ಐಚ್ಛಿಕ ಲಿಂಗವನ್ನೂ ಕಡ್ಡಾಯವಾಗಿ ಕಟ್ಟಿಕೊಂಡರೆ, ಮುಂದಿನ ದಿನಗಳಲ್ಲಿ ಇನ್ನೂ ಹೊಂದಿಕೊಂಡು ಬಾಳುವ ಸಲುವಾಗಿ ಜನಿವಾರ ತ್ಯೆಜಿಸಿ, ಎದೆಯ ಮೇಲೆ ಲಿಂಗವೊಂದನ್ನೇ ಉಳಿಸಿಕೊಂಡರು. ಇಂಥ ಎರಡು ಬಗೆಯ ಆರಾಧ್ಯ ಜಂಗಮರು (ಇವರ ಮನೆಯಲ್ಲಿ ತೆಲಗು ಜೀವಂತವಿದೆ) ಮೈಸೂರು ಪ್ರದೇಶದಲ್ಲಿ ಈಗಲೂ ಇದ್ದಾರೆ. ಇವರಲ್ಲಿ ಲಿಂಗವನ್ನು ಮಾತ್ರ ಉಳಿಸಿಕೊಂಡ ಆರಾಧ್ಯ ಜಂಗಮರು ತಮ್ಮ ಸಂಪ್ರದಾಯಿಕ ವೇದಘೋಷ, ಹೋಮ ಹವನ, ಸಂಸ್ಕೃತ ಧರ್ಮ ಗ್ರಂಥ, ಪರಂಪರೆಯ ಸುಳ್ಳು ಪ್ರಾಚೀನತೆ ಇತ್ಯಾದಿಗಳನ್ನು ಮುಂದೊಡ್ಡಿ, ಶರಣ ಜಂಗಮರಲ್ಲಿ ಹುಸಿಪ್ರತಿಷ್ಠೆಯ ಭ್ರಮೆ ಹುಟ್ಟಿಸಿದರು. 12ನೆಯ ಶತಮಾನದಲ್ಲಿ ಕಳೆದುಕೊಂಡಿದ್ದ ನಕುಲೀಶ, ಪಾಶುಪತ, ಮಹಾವ್ರತಿ, ಶುದ್ಧಶೈವಗಳೆಂಬ ನಾಲ್ಕುಶೈವಗಳ ಮರುಹುಟ್ಟು ಎಂಬಂತೆ ಹೊಸದಾಗಿ ನಾಲ್ಕು ಆಚಾರ್ಯ ಪೀಠಗಳನ್ನು ಕಲ್ಪಿಸಿ, ಶರಣ ಜಂಗಮರ ಮಠಗಳನ್ನು ಹಂಚಿಕೊಂಡು ಹೊಸಬಗೆಯ ಮಠೀಯ ವ್ಯವಸ್ಥೆಯನ್ನು ರೂಢಿಸಿದರು.
ಇವರು ಕಲ್ಪಿಸಿದ ರೇಣುಕಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ 'ಲಿಂಗಯಜ್ಞೋಪವೀತಿನೇ ನಮ:' ಎಂಬ, ಮರುಳಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ 'ಶಿಖಾಯಜ್ಞೋಪವೀತಿನೇ ನಮ:' ಎಂಬ ವಾಕ್ಯಗಳನ್ನು ನೋಡಿದರೆ ಯಜ್ಞೋಪವೀತ, ಲಿಂಗ, ಜುಟ್ಟು ಮನ್ನಿಸುವ ಇವರಿಗೂ ಸಂಬಂಧವಿಲ್ಲವೆಂದು ಸ್ಪಷ್ಟವಾಗುತ್ತದೆ.
1606ರ ಗುಮ್ಮಳಾಪುರ ಶಾಸನವು 'ಭಾರದ್ವಾಜ ಗೋತ್ರದ ಪಡಿವಿಡಿ ವರ್ಗದ ಕೊಲ್ಲಿಪಾಕೆ ರೇವಣ ಸಿದ್ಧೇಶ್ವರ ಸಂಪ್ರದಾಯದವರಾದ ಗುಮ್ಮಳಾಪುರ ಸಿಂಹಾಸನ ಕರ್ತರಾದ' ಎಂದು ನಂಜಯ್ಯ ದೇವರನ್ನು ವರ್ಣಿಸಿದೆ. ಹೀಗೆಯೇ ಈ ಆರಾಧ್ಯ ಜಂಗಮರಿಗೆ ಭಾರದ್ವಾಜ, ಅತ್ರಿ ಮೊದಲಾದ ಗೊತ್ರಗಳು ಶಾಸನಗಳಲ್ಲಿ 18ನೆಯ ಶತಮಾನದವರೆಗೂ ಕಂಡುಬರುತ್ತಿದ್ದು, ಇತ್ತೀಚಿಗೆ ಇವುಗಳಿಗೆ ಬದಲು ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಗೋತ್ರಗಳನ್ನು ಕಲ್ಪಿಸಿಕೊಂಡಿದ್ದಾರೆ. ಇಂಥ ವೈದಿಕ ಗೊತ್ರ ವಾದಿಗಳನ್ನು 'ಗೋತ್ರ ಮಾದಾರ ಚೆನ್ನಯ್ಯನೆಂದು ಹೇಳಿರಯ್ಯ' ಎಂಬ ನಿಲುವಿನ ಲಿಂಗಾಯತರೆನ್ನಬಹುದೇ? ಈ ಬ್ರಾಹ್ಮಣ್ಯಕಾರವಾಗಿಯೇ ಇವರು ಸೊಲ್ಲಾಪುರ ವಾರದ ಮಲ್ಲಪ್ಪನವರ ಹಣ ಬಳಸಿಕೊಂಡು, ತಮ್ಮ ಪ್ರಕಟಣೆಗಳಿಗೆ 'ಲಿಂಗಿ ಬ್ರಾಹ್ಮಣ ಗ್ರಂಥಮಾಲೆ' ಎಂಬ ಹೆಸರಿಟ್ಟಿದ್ದರು. ಇವರು ಶರಣ ಜಂಗಮರೊಂದಿಗಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿಕೊಳ್ಳಲು, ತಮ್ಮ ಪ್ರಾಚೀನತೆ ಸಾಧಿಸಿಕೊಳ್ಳಲು ಚತುರಾಚಾರ್ಯರ ಹೆಸರು ಸೇರಿಸಿ 3-4 ಜನ ಅಪ್ರಸಿದ್ಧ ಶರಣರ ಹೆರಿನಲ್ಲಿ 4-5 ಕೃತಕ-ನೀರಸ ವಚನ ಬರೆದರು. ಚತುರಾಚಾರ್ಯರು ಪ್ರಸಿದ್ದರೇ ಆಗಿದ್ದರೆ 12ನೆಯ ಶತಮಾನದ ಮಿಕ್ಕ ಪ್ರಸಿದ್ದ ಬಸವ ಅಲ್ಲಮ ಚೆನ್ನ ಬಸವರೇಕ ಇವರನ್ನು ಹೆಸರಿಸಲಿಲ್ಲ? 13ನೆಯ ಶತಮಾನದ ಹರಿಹರ, ರಾಘವಾಂಕ, 14ನೆಯ ಶತಮಾನದ ಭೀಮಕವಿ, 15ನೆಯ ಶತಮಾನದ ಮಗ್ಗೆಯ ಮಾಯಿದೇವ, ಲಕ್ಕಣದಂಡೇಶ, ಮಹಾಲಿಂಗದೇವ, ಜಕ್ಕಣಾರ್ಯ, ಕಲ್ಲುಮಠದ ಪ್ರಭುದೇವ, ಚಾಮರಸರು ಇವರನ್ನು ಕುರಿತು ಸ್ವತಂತ್ರ ಕೃತಿ ರಚಿಸುವುದು ಹೋಗಲಿ, ಪ್ರಾಸಂಗಿಕವಾಗಿಯೂ ಏಕೆ ಪ್ರಸ್ತಾಪ ಮಾಡುವುದಿಲ್ಲ? ಕೃತಿ ಪ್ರಾರಂಭದಲ್ಲಿ ಸ್ತುತಿಯನ್ನು ಏಕೆ ಮಾಡಿಲ್ಲ. ಹರಿಹರ ಬರೆದಿರುವ ರಗಳೆ ಚತುರಾಚಾರ್ಯ ಒಕ್ಕುಟದ ರೇವಣಾರಾಧ್ಯನನ್ನು ಕುರಿತುದಲ್ಲ. ಶೈವ ನಾಥಪಂಥೀಯ ರೇವಣ ಸಿದ್ಧನನ್ನು ಕುರಿತುದಾಗಿದೆ. ಹರಿಹರನ ಸಮಕಾಲಿನನಾದ ಪ್ರಸಿದ್ಧ ನಾಗನಾಥಾಚಾರ್ಯ ತನ್ನ ಸುಪ್ರಸಿದ್ಧ 'ವೀರಮಾಹೇಶ್ವರಾಚಾರ ಸಂಗ್ರಹ'ದ ಪೀಠಿಕೆಯಲ್ಲಿ ದೇವರ ಸ್ತುತಿ ಮುಗಿಸುತ್ತಲೇ ನಮೋ ಬಸವರಾಚಾಯ ಎಂದು ಮೊದಲಾಗಿ ನಾಲ್ಕೈದು ಜನ ಶರಣರನ್ನು ನೆನೆಯುವನೇ ಹೊರತು ಚತುರಾಚಾರ್ಯರನ್ನಲ್ಲ. ಇದು ಈ ಹೊತ್ತಿಗೆ ಚತುರಾಚಾರ್ಯರ ಪರಿಕಲ್ಪನೆ ಇನ್ನೂ ಹುಟ್ಟಿರಲಿಲ್ಲವೆಂದೇ ಸೂಚಿಸುತ್ತದೆ. ಇಷ್ಟೇ ಏಕೆ ಸಂಪಾದನೆಯ ಪರ್ವತೇಶ ತಾನು ಚತುರಾಚಾರ್ಯ ಪುರಾಣ ಬರೆಯುತ್ತಿದ್ದರೂ ಆರಂಭದ ದೇವತಾ ಸ್ತುತಿ ಮುಗಿಯುತ್ತಲೇ ಬಸವಾದಿ ಶರಣರನ್ನು ಸ್ಮರಿಸಿರುವುದು ಈ ಪುರಾಣ ರಚಿಸುವ ಕಾಲದಲ್ಲಿಯು (1698) ಎಲ್ಲ ಧಾರ್ಮಿಕ ಪುರುಷರಿಗಿಂತ ಶರಣರಿಗೆ ಪೂಜ್ಯಸ್ಥಾನ ಸಲ್ಲಿಸುತ್ತಿದ್ದುದನ್ನು ಸೂಚಿಸುತ್ತದೆ.
ಈ ಚತುರಾಚಾರ್ಯರನ್ನು ಕುರಿತು ಸಣ್ಣ ಪ್ರಸ್ತಾಪ ಮೊದಲ ಬಾರಿ ಬರುವುದು 1530 ಗುಬ್ಬಿ ಮಲ್ಲಣ್ಣನ ವೀರಶೈವಾಮೃತ ಮಹಾಪುರಾಣದಲ್ಲಿ. ಆಮೇಲೆ ನಾಲ್ವರನ್ನು ಕುರಿತು ಮೊದಲ ಸ್ವತಂತ್ರ ಕೃತಿಯೆಂದು1668 ರಲ್ಲಿ ಸಂಪಾದನೆಯ ಪರ್ವತೇಶ ಬರೆದ ಚತುರಾಚಾರ್ಯ ಪುರಾಣ. ಆಶ್ಚರ್ಯದ ಸಂಗತಿಯೆಂದರೆ ಇಂದು ಚತುರಾಚಾರ್ಯರಲ್ಲಿ ಪರಿಣಿತನಾಗಿರುವ ಶ್ರೀಶೈಲಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯನನ್ನು ಬಿಟ್ಟು ಇವನು ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯನನ್ನು ಸೇರಿದ್ದಾನೆ. ಈ ಗೊಂದಲವನ್ನು ನೋಡಿದರೆ ಇವನ ಕಾಲದ ವರೆಗೂ ಚತುರಾಚಾರ್ಯ ಒಕ್ಕೂಟದಲ್ಲಿ ಯಾರ ಹೆಸರು ಸೇರಿಸಬೇಕೆಂಬ ಬಗ್ಗೆ ಇವರಲ್ಲಿಯೇ ಒಂದು ನಿಶ್ಚಿತ ನಿಲವು ಇರಲಿಲ್ಲವೆನಿಸುತ್ತದೆ. ಮಿಕ್ಕ ಕೃತಿಗಳಲ್ಲಿ ಈ ಗೊಂದಲ ಇನ್ನೂ ವರ್ಧಿಸಿದೆ. ಮುಂದಿನ ದಿನಗಳಲ್ಲಿ ಕಾಶಿ ಪೀಠವನ್ನು ಸೇರಿಸಿ, ಪಂಚಾಚಾರ್ಯ ವರ್ತುಲವನ್ನು ಪೂರ್ಣಗೊಳಿಸಿ, ಅಧಿಕೃತತೆಯ ಸಲುವಾಗಿ ಈ ಕಲ್ಪಿತ ಸಂಗತಿಗಳನ್ನು ಆಗಮಗಳಲ್ಲಿ ಸೇರಿದರು. ಕರ್ನಾಟಕದ ಹೊರಗೆ ಸಿಗುವ ಆಗಮ ಹಸ್ತ ಪ್ರತಿಗಳಲ್ಲಿ ಈ ಸಂಗತಿಗಳಿಲ್ಲವೆಂದು ತಿಳಿದು ಬಂದಿದೆ. ಸಾಲದುದಕ್ಕೆ ಸಿದ್ಧಾಂತ ಶಿಖಾಮಣಿಯೆಂಬ ಕೃತಕ ಗ್ರಂಥ ರಚಿಸಿ, ಒಂದು ಧರ್ಮಕ್ಕೆ ಬೇಕಾಗುವ ಧರ್ಮಾಧಿಕಾರಿ, ಧರ್ಮಗ್ರಂಥ, ಧಾರ್ಮಿಕಕೇಂದ್ರಗಳೆಂಬ ಮಠ, ಶರಣ ಜಂಗನರ ಸನುಯಾಯಿತ್ವ ಇತ್ಯಾದಿಗಳನ್ನೆಲ್ಲ ಜೊಡಿಸಿಕೊಂಡರು. ಹೀಗೆ ಒಳಗಿನ ಶರಣ ಜಂಗಮರು ಪ್ರಜಾಧರ್ಮವಾಗಿರುವ ತಮ್ಮ ಶರಣ ಪರಂಪರೆಯನ್ನು ಬಲಿಕೊಟ್ಟು, ಹೊರಗಿನ ಈ ಪುರೋಹಿತ ಶಾಹಿಯನ್ನು ಸ್ವಾಗತಿಸಿದರು.
ಈ ಎಲ್ಲ ಚಟುವಟಿಕೆಗಳ ಪರಿಣಾಮವಾಗಿ ಉಜ್ಜಿನಿಯ ಸಾದರಲಿಂಗಾಯತ ಒಡೆತನದ ಮಲ್ಲಿಕಾರ್ಜುನ ಕ್ಷೇತ್ರವು ಮರುಳಾರಾಧ್ಯ ಪೀಠವಾದುದೂ. ಮುಕ್ತಿ ಮುನಿನಾಥ ಪರಂಪರೆಯ ಬಾಳೆ ಹಳ್ಳಿಯ ನಾಥಕ್ಷೇತ್ರವು ರೇವಣಾರಾಧ್ಯ ಪೀಠವಾದುದು ಇತಿಹಾಸವನ್ನು ಮುಚ್ಚಿಹಾಕಿದ ಸಂಗತಿಗಳಾಗಿವೆ. ಕಾಶಿಯ ಗೋಸಾವಿಮಠ ಕಿತ್ತುಕೊಂಡು, ನರೇಶ ಜಯನಂದನ ಮಹಾರಾಜನ ದತ್ತಿ ಇತ್ಯಾದಿ ದಾಖಲೆಗಳನ್ನು ಸೃಷ್ಠಿಸಿದುದು, ಮಲ್ಲಿಕಾರ್ಜುನ ಜಂಗಮ ಗೋಸಾವಿ ಇತ್ಯಾದಿ ಗುರುಗಳ ಹೆಸರನ್ನು ಮಲ್ಲಿಕಾರ್ಜುನ ಶಿವಾಚಾರ್ಯರೆಂದು ಬದಲಾಯಿಸಿರುವುದು, ಈ ಪೀಠ ವೀರಶೈವರ ಕೈಗೆ ಬಂದು ಕೇವಲ 9 ತಲೆಮಾರು ಗತಿಸಿದ್ದರೂ 86 ತಲೆಮಾರುಗಳ ಪಟ್ಟಿ ಪ್ರಕಟಿಸಿದುದು ಸುಳ್ಳಿನ ಕಂತೆಗಳೇ ಸರಿ.
ಶರಣರು ಗುರುಮಾರ್ಗಿಗಳು, ಪಂಚಾಚಾರ್ಯರು ಆಚಾರ್ಯ ಮಾರ್ಗಿಗಳು. ಹೀಗಾಗಿ ಅವರು ಜಗದ್ಗುರುಗಳು, ಇವರು ಜಗದಾಚಾರ್ಯರು. ಹೀಗಿದ್ದೂ 19ನೆಯ ಶತಮಾನದಿಂದ ತಮ್ಮನ್ನು ಜಗದ್ಗುರುಗಳೆಂದು ಕರೆದುಕೊಂಡುದು ತಾತ್ವಿಕ ವಿರೋಧವಾಗಿದೆ. ಇವರು 'ಜಗದ್ಗುರು' ವಿಶೇಷಣ ಬಳಸಬಾರದೆಂದು ಕಳೆದ ಶತಮಾನದಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಸಿದ್ದರಾಮಪ್ಪ ಪಾವಟೆಯವರು ಕೋರ್ಟಿನಲ್ಲಿ ವಾದಿಸಿದುದನ್ನು ಇಲ್ಲಿ ನೆನೆಯಬಹುದು. ಇಂಥ ಇನ್ನೊಂದು ತಾತ್ವಿಕ ವಿರೋಧವೆಂದರೆ ಶರಣ ಜಂಗಮರದು 'ಅದ್ವೈತ'ವಾದರೆ, ಕೈಲಾಸ, ಶಿವ-ಪಾರ್ವತಿ, ಸಾಲೋಕ್ಯ ಇತ್ಯಾದಿಗಳನ್ನು ನಂಬುವ ಆರಾಧ್ಯ ಜಂಗಮರದು 'ದ್ವೈತ' ವಾಗಿದೆ. ಇಂಥ ವೈರುಧ್ಯಗಳ ನಡುವೆಯೂ ಕೆಲವು ಸಾಮ್ಯಗಳನ್ನು ಸೃಷ್ಠಿಸಿ, ಈ ಆಂದ್ರಮೂಲದ ಾರಾಧ್ಯ ಜಂಗಮರು ಕರ್ನಾಡಕ ಮೂಲದ ಶರಣ ಜಂಗಮರನ್ನು ನಂಬಿಸಿ, ಅವರ ಮೇಲೆ ಸವಾರಿ ಮಾಡಿದರು. ಮುಗ್ಧಭಕ್ತರೂ ಇದಕ್ಕೆ ಕೈಜೋಡಿಸಿದರು
-ಡಾ. ಎಂ.ಎಂ. ಕಲಬುರ್ಗಿ
ವಿಶ್ರಾಂತ ಕುಲಪತಿಗಳು