Tuesday, May 18, 2010

Basava Smaaraka


ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿಯ ಬಸವಣ್ಣನ ಜನ್ಮಸ್ಥಳದಲ್ಲಿ ನಿರ್ಮಿಸಿರುವ ಭವ್ಯ ಸ್ಮಾರಕ.


ಬಸವ ಸ್ಮಾರಕ ಲೋಕಾರ್ಪಣೆ

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ

ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನಿಗೊಂದು ಸ್ಥಿರ ಸ್ಮಾರಕ ಆತನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಾಣವಾಗಿದೆ. ಆ ಮೂಲಕ ಬಸವಾಭಿಮಾನಿಗಳ ಬಹುದಿನಗಳ ಕನಸೊಂದು ನನಸಾಗಿದೆ.

ವಿಜಾಪುರ: ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನಿಗೊಂದು ಸ್ಥಿರ ಸ್ಮಾರಕ ಆತನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಾಣವಾಗಿದೆ. ಆ ಮೂಲಕ ಬಸವಾಭಿಮಾನಿಗಳ ಬಹುದಿನಗಳ ಕನಸೊಂದು ನನಸಾಗಿದೆ.

ಇಂಡೋ-ಸಾರ್ಸೆನಿಕ್ ಶಿಲ್ಪಕಲೆ ಹಾಗೂ ಅಷ್ಟಕೋನಾಕೃತಿ ಶೈಲಿಯ ಈ ಸ್ಮಾರಕ 90 ಅಡಿ ಎತ್ತರವಿದೆ. ಸ್ಮಾರಕದ ಸುತ್ತಲೂ ವರಾಂಡ ಇದ್ದು, ಚಾಲುಕ್ಯ ಶೈಲಿಯಲ್ಲಿ ಕೆತ್ತಿದ ಗ್ರಾನೈಟ್ ಕಲ್ಲಿನ ಕಂಬಗಳನ್ನು ಅಳವಡಿಸಲಾಗಿದೆ. ಪ್ರದರ್ಶನ ಸ್ಥಳದ ಛಾವಣಿ 30 ಅಡಿ ಎತ್ತರವಿದೆ. ಮಧ್ಯದಲ್ಲಿ 36 ಅಡಿ ಎತ್ತರದ ಇಂಡೋ-ಸಾರ್ಸೆನಿಕ್ ಶೈಲಿಯ ಗೋಪುರ ನಿರ್ಮಿಸಲಾಗಿದೆ. ಸುತ್ತಲೂ ಇರುವ ಕಿಂಡಿಗಳಿಂದ ದಿನವಿಡೀ ಸೂರ್ಯನ ಬೆಳಕು ಸ್ಮಾರಕದ ಒಳಗೆ ಬೀಳುವಂತೆ ಮಾಡಲಾಗಿದೆ.


ಬಸವಣ್ಣನವರ ಬಾಲ್ಯದ ದಿನಗಳಿಂದ ಹಿಡಿದು ಕೂಡಲ ಸಂಗಮದಲ್ಲಿ ಐಕ್ಯವಾಗುವವರೆಗೆ ಅವರ ಜೀವನದ ಪ್ರಮುಖ ಘಟನಾವಳಿಗಳನ್ನು ಪರಿಚಯಿಸುವ ಕಟ್ಟಿಗೆ, ಗಾಜು, ಕಲ್ಲು, ಕಂಚಿನಿಂದ ನಿರ್ಮಿಸಿರುವ ಕಲಾಕೃತಿಗಳು ಈ ಸ್ಮಾರಕದ ಮುಖ್ಯ ಆಕರ್ಷಣೆ.

ಬಸವಣ್ಣನವರ ತಂದೆ ಮಾದರಸ, ಅಕ್ಕ ನಾಗಮ್ಮ ಅವರ ಕಂಚಿನ ಮೂರ್ತಿ, ಕಟ್ಟಿಗೆಯ ತೊಟ್ಟಿಲು, ತಾಯಿ ಮಾದಲಾಂಬಿಕೆ ತನ್ನ ಮಗು ಬಸವಣ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡಾಗ ಗುರು ಜಾತವೇದ ಮುನಿಗಳು ಆಶೀರ್ವದಿಸುವ ಮೂರ್ತಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸ್ಮಾರಕದ ಮುಖ್ಯ ರಸ್ತೆಗೆ ಮಹಾದ್ವಾರ ಹಾಗೂ ವಿಶಾಲವಾದ ರಸ್ತೆ, ಉದ್ಯಾನವನ ತಲೆ ಎತ್ತಿದೆ. ಸ್ಮಾರಕದ ಕೆಳ ಮಹಡಿಯಲ್ಲಿ 250 ಆಸನದ ವಿಶಾಲವಾದ ಸಭಾಭವನ, ಗ್ರಂಥಾಲಯ ನಿರ್ಮಿಸಲಾಗಿದೆ.

ಜನತೆಯ ಬೇಡಿಕೆಯಂತೆ ಬಸವನ ಬಾಗೇವಾಡಿಯನ್ನು 2004ಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಲಾಯಿತು. ಬಸವಣ್ಣ ಜನಿಸಿದ ಮನೆಯ ಸುತ್ತಲಿನ 56 ಮನೆಗಳನ್ನು ಸ್ವಾಧೀನ ಪಡಿಸಿಕೊಂಡು ಪ್ರಾಧಿಕಾರ ಈ ಸ್ಮಾರಕ ನಿರ್ಮಿಸಿದೆ.

ಬಸವನ ಬಾಗೇವಾಡಿಯಲ್ಲಿರುವ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ತ್ರಿಕೂಟೇಶ್ವರ ದೇವಾಲಯದ ಶೈಲಿಯಲ್ಲಿ ಹಾಗೂ ಮೂಲ ದೇವಸ್ಥಾನದ ವಿನ್ಯಾಸಕ್ಕೆ ಧಕ್ಕೆ ಬರದ ಹಾಗೆ ಪುನರ್ ನಿರ್ಮಿಸಲಾಗುತ್ತಿದೆ

ಪಠ್ಯಪುಸ್ತಕದಲ್ಲಿ ಬಸವಣ್ಣನ ಜೀವನ ಸಾಧನೆ :ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ ಸೋಮವಾರ , ಮೇ 17, 2010

ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಿಸಿರುವ ‘ಬಸವ ಸ್ಮಾರಕ ಭವನ’ವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.

ವಿಜಾಪುರ: ‘ಯುಗ ಪರಿವರ್ತಕ ಬಸವಣ್ಣನ ಜನ್ಮಭೂಮಿ ಬಸವನ ಬಾಗೇವಾಡಿಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವುದರ ಜೊತೆಗೆ, ಬಸವಣ್ಣನವರ ಸಂದೇಶಗಳನ್ನು ಜಗತ್ತಿಗೆ ತಲುಪಿಸುವ ಸಂಕಲ್ಪ ನಮ್ಮದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಿಸಿರುವ ‘ಬಸವ ಸ್ಮಾರಕ ಭವನ’ವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು


‘ಬಸವಣ್ಣ’ ಅವರು ಅಮರ ಸಮಾಜ ಸುಧಾರಕರು. ಗಾಂಧಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರ ವಿಚಾರಗಳನ್ನು 800 ವರ್ಷಗಳ ಹಿಂದೆಯೇ ಆಚರಣೆಗೆ ತಂದಿದ್ದರು. ಬಸವಣ್ಣ ಸಾರಿದ ಸ್ತ್ರೀ ಸ್ವಾತಂತ್ರ್ಯ ಜಗತ್ತಿಗೆ ಆದರ್ಶಪ್ರಾಯ. ಅಂತಹ ಮಹಾನ್ ದಾರ್ಶನಿಕನ ಜೀವನ-ಸಾಧನೆಗಳು ಪಠ್ಯಪುಸ್ತಕದಲ್ಲಿ ಬರುವಂತೆ ನೋಡಿಕೊಳ್ಳಬೇಕಿದೆ. ಮನೆ-ಮನಗಳಲ್ಲಿ ನಾವೆಲ್ಲರೂ ಅವರನ್ನು ಆರಾಧಿಸಬೇಕಿದೆ’ ಎಂದರು

‘ಡಾ.ಶಿವಾನಂದ ಜಾಮದಾರ ಅವರಂಥ ಒಬ್ಬ ಅಧಿಕಾರಿ, ಜಿಲ್ಲಾ ಆಡಳಿತ ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎಂಬುದಕ್ಕೆ ಈ ಸ್ಮಾರಕವೇ ಉದಾಹರಣೆ. ಬಸವಣ್ಣ ಕೇವಲ ಕರ್ನಾಟಕದ ಹೆಮ್ಮೆಯ ಪುತ್ರ ಮಾತ್ರವಲ್ಲ. ನಾಡಿನ ಶ್ರೇಷ್ಠ ವ್ಯಕ್ತಿ. ಅವರ ಜೀವನ-ಸಾಧನೆ ಪರಿಚಯಿಸುವ ಈ ಸ್ಮಾರಕ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ. ನಾಡಿನ ಜನರೆಲ್ಲ ಇಲ್ಲಿಗೆ ಬಂದು

ನೋಡುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಮೈಸೂರು ದಸರೆ, ಹಂಪಿ ಉತ್ಸವದ ಮಾದರಿಯಲ್ಲಿ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿಯನ್ನು ನಾಡಹಬ್ಬವನ್ನಾಗಿ ಆಚರಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದರು.

ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಅವರನ್ನು ಸನ್ಮಾನಿಸಲಾಯಿತು.

‘ಶೋಷಿತರ ಹಕ್ಕುಗಳಿಗೆ ಹೋರಾಡಿದ ಪ್ರಥಮ ವ್ಯಕ್ತಿ ಬಸವಣ್ಣ’ –

ಬಸವನಬಾಗೇವಾಡಿ: ಸ್ತ್ರೀ ಪುರುಷರ ಮಧ್ಯೆ ಇದ್ದ ಅಸಮಾನತೆ ಯನ್ನು ನಿವಾರಿಸಿ, ಮೇಲು ಕೀಳು ಭಾವನೆ ತೊರೆದು, ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು, ಶೋಷಿತರ ಹಕ್ಕುಗಳಿಗೋಸ್ಕರ ಹೋರಾಟ ಮಾಡಿದ ವ್ಯಕ್ತಿ ಬಸವಣ್ಣ ಎಂದು ಚಿತ್ರದುರ್ಗದ

ಬೃಹನ್ಮಠದ ಶ್ರೀ ಶಿವಮೂರ್ತಿ ಮುರಘರಾಜೇಂದ್ರ ಶರಣರು ಹೇಳಿದರು.


ಪಟ್ಟಣದಲ್ಲಿ ಬಸವ ಜನ್ಮ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಠ ಮಂದಿರಗಳಲ್ಲಿ ಗರ್ಭ ಗುಡಿಗೆ ಪ್ರವೇಶ ನಿಷೇಧಿಸಿದ್ದನ್ನು ವಿರೋಧಿಸಿ ಶೋಷಿತ, ದೀನ ದಲಿತರ ಪರವಾಗಿ ಅವರ ಹಕ್ಕನ್ನು ಮಂಡಿಸಿದ ವ್ಯಕ್ತಿ ಬಸವಣ್ಣ ಎಂದರು.

ತಮ್ಮ ವಿವಿಧ ಸರಳ ವಚನಗಳ ಮೂಲಕ ಸಮಾಜ ದಲ್ಲಿ ಸಮಾನತೆ ತರಲು ಹೋರಾಡಿದ ವನು ಬಸವಣ್ಣ. ಎಲ್ಲರನ್ನು ನಮ್ಮವರಂತೆ ತಿಳಿಯಬೇಕು ಅಂದಾಗ ಬಸವ ಧರ್ಮ, ಬಸವ ಕುಲ ಉದ್ಧಾರ ಆಗುತ್ತದೆ ಎಂದರು.

ಬಸವಣ್ಣನವರು ಹಾಕಿಕೊಂಡ ಸಾಧನೆಗಳ ಸರಮಾಲೆಯನ್ನು ಯಾರೂ ತೆಗೆಯಲು ಸಾಧ್ಯವಿಲ್ಲ, ಆ ಸರಮಾಲೆ ಇಂದಿನ ಜನಕ್ಕೆ ಸ್ಫೂರ್ತಿಯಾಗಬೇಕು, ಆ ಸಾಧನೆಯ ಮೂರ್ತಿಯೇ ಕೀರ್ತಿಯ ಮೂರ್ತಿಯಾಗಲು ಸಾಧ್ಯ ಎಂದರು.

ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಬಸವಣ್ಣ ಹುಟ್ಟಿದ ನಾಡಿನಲ್ಲಿ ಬಸವ ಜಯಂತಿ ಆಚರಿಸುವುದು ಭಾವನಾತ್ಮಕ ಬೆಸುಗೆಯ ಅನುಭವ ಸಾರುತ್ತದೆ. ಬಸವಣ್ಣನಂಥ ಮಹಾನ್ ವ್ಯಕ್ತಿಯನ್ನು ವಿಶ್ವಕ್ಕೆ ನೀಡಿದ ಈ ನಾಡು ಧನ್ಯ. ಭಾನುವಾರದ ಮೆರವಣಿಗೆಯಲ್ಲಿ ಕುಂಭ ಮೇಳದ ಹೊರತಾಗಿ ವಚನಗಳ ಕಟ್ಟುಗಳನ್ನು ಹೊತ್ತು ಮೆರವಣಿಗೆ ಮಾಡಿದ್ದು ಭಾವ ತೀವ್ರತೆಯ ಸಂಗಮ ಎಂದರು.

ಫ್ರಾನ್ಸ್ ದೇಶದ ಪ್ಯಾರಿಸ್ ನಗರದ ಗ್ರಂಥಾಲಯದಲ್ಲಿ ತಾಳೆಗರಿ ಸಂಗ್ರಹ ಕೊಠಡಿಯಿದೆ. ಅಲ್ಲಿ ಹೋದಾಗ ಒಂದು ತಾಳೆಗರಿಯ ಕಟ್ಟನ್ನು ನೋಡಿದಾಗ ಅದು ಬಸವಣ್ಣನ ವಚನದ ತಮಿಳು ಭಾಷಾಂತರ ವಾಗಿತ್ತು. ಆ ವಚನದ ತಿರುಳು “ಶಿವಭಕ್ತರಿಲ್ಲದ ಊರು ಸುಡುಗಾಡು ಕೂಡಲಸಂಗಮ” ಎಂದು ಇತ್ತು. ಬಹು ಹಿಂದೆಯೇ ಬಸವಣ್ಣನವರು ವಚನ ಬೇರೆ ಬೇರೆ ಭಾಷೆಗೆ ಭಾಷಾಂತರವಾಗಿದ್ದು ಇದಕ್ಕೆ ಸಾಕ್ಷಿ, ಹೀಗಾಗಿ ಬಸವಣ್ಣ ವಿಶ್ವ ಗುರು ಎಂದರು.

ವೇದಿಕೆಯ ಮೇಲೆ ಗದುಗಿನ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿ, ಇಲಕಲ್ಲನ ಡಾ. ಮಹಾಂತ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಯರನಾಳದ ಗುರುಸಂಗನಬಸವ ಸ್ವಾಮೀಜಿ, ಅವರಾದಿಯ ಮೃತ್ಯುಂಜಯ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ, ಜೋಗ ಫಾಲ್ಸ್ ಮಠದ ಡಾ. ವಿಜಯಕುಮಾರ ಮಹಾನುಭಾವಿಗಳು, ಕೌಠಾದ ಬೆಲ್ದಾಳ ಶರಣ ಆಶ್ರಮದ ಬೆಲ್ದಾಳ ಸಿದ್ದರಾಮ ಶರಣರು, ಬೀದರ ಬಸವ ಸೇವಾಶ್ರಮದ ಅಕ್ಕಅನ್ನಪೂರ್ಣ, ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ, ಬಸವ ಕಲ್ಯಾಣದ ಶರಣೆ ಬಸವರಾಜೇಶ್ವರಿ, ಚಿತ್ರದುರ್ಗ ಮಾದಾರ ಚೆನ್ನಯ್ಯ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಗುರುಪೀಠದ ಸೇವಾಲಾಲ ಸರ್ದಾರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಶಾಸಕ ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು.

ಸಂಕಲನ
ಪ್ರಕಾಶ್ ಬಿರಾದರ